ಬರಹ
ವ್ಯಕ್ತಿ-ವ್ಯಕ್ತಿ ನಡುವೆ ಸಂವಹನತೆಗಾಗಿ ಬಳಸುವ ಸಾಂಪ್ರದಾಯಿಕ ಚಾಕ್ಷುಷ ವ್ಯವಸ್ಥೆ (ರೈಟಿಂಗ್). ಭಾಷೆ ಶ್ರವಣಾತ್ಮಕ. ಇದು ಚಾಕ್ಷುಷವೂ ಆಗದಿದ್ದರೆ ಇದರ ಪ್ರಯೋಜನ ತೀರ ಸೀಮಿತವಾಗುತ್ತದೆ. ಭಾಷೆಯ ಈ ಪರಿಮಿತ ಸ್ವರೂಪ ಕಳೆದು ಅದನ್ನು ಸಾರ್ವಕಾಲಿಕವಾಗಿ ಮಾಡುವುದೇ ಬರಹ. ಭಾಷೆಯ ಮಾಧ್ಯಮ ಧ್ವನಿ, ಬರಹದ ಮಾಧ್ಯಮ ಲಿಪಿ.

ಭಾಷೆಯ ಪ್ರಯೋಜನ ಕಂಡುಕೊಂಡು ಸಾವಿರಾರು ವರ್ಷಗಳ ತರುವಾಯ ಮಾನವ ಬರಹದ ಉಪಯೋಗ ಕಂಡುಕೊಂಡ. ಭಾಷೆ ಆತನ ಮೂಲಭೂತ ಆವಶ್ಯಕತೆ. ಬರಹವಾದರೋ ಹೀಗಲ್ಲ. ಆದರೆ ಬರಹ ಆತನ ಸಿದ್ಧಿ ಸಾಧನೆಗಳನ್ನು ಸಂಸ್ಕøತಿ ಶೋಧನೆಗಳನ್ನು ಘನೀಕರಿಸಿ ಭವಿಷ್ಯದ ಉಪಯೋಗಕ್ಕೆ ಒದಗಿಸುವ ಮಾಧ್ಯಮವಾಗಿ ವಿಶೇಷ ಪಾತ್ರ ನಿರ್ವಹಿಸಿದೆ ಎಂದೇ ನಾಗರಿಕತೆಯ ವಿಕಾಸದಲ್ಲಿ ಭಾಷೆಯ ಉಗಮವನ್ನು ಮೊದಲ ಕ್ರಾಂತಿ ಎಂದೂ ಬರಹದ (ಲಿಪಿಯ) ಉಗಮ ಎರಡನೆಯ ಕ್ರಾಂತಿಯೆಂದೂ ಪ್ರಸಿದ್ಧವಾಗಿದೆ. ಬರಹ ವ್ಯವಸ್ಥೆ ಕೈವಶವಾದ ತರುವಾಯ ಭಾಷೆ ವೇಗವಾಗಿ ಬೆಳೆಯತೊಡಗಿತು. ಲಿಪಿವ್ಯವಸ್ಥೆಯಿಂದ ಹಿಂದಿನವರ ವಿಚಾರ ತಿಳಿದು ಆ ಜ್ಞಾನದ ಬಲದಿಂದ ಹೆಚ್ಚು ಪ್ರಗತಿ ಸಾಧಿಸಲು ಸಹಾಯಕವಾಯಿತು. ಬರಹ ಪದ್ಧತಿ ರೂಢಿಗೆ ಬಂದ ಬಳಿಕವೇ ಸಾಹಿತ್ಯ, ಶಾಸ್ತ್ರ, ವಿಜ್ಞಾನ ಮುಂತಾದ ಕ್ಷೇತ್ರಗಳು ಬೃಹತ್ ಪ್ರಮಾಣದಲ್ಲಿ ಬೆಳೆದದ್ದು.
ಭಾಷೆ ಮತ್ತು ಬರಹಗಳಿಗಿರುವ ಸಂಬಂಧ ಅತಿ ನಿಕಟ. ಪ್ರಪಂಚದಲ್ಲಿ ಭಾಷೆ ಇಲ್ಲದ ಜನಾಂಗವೇ ಇಲ್ಲ. ಆದರೆ ಬರಹ ತಿಳಿಯದ ಅನೇಕ ಜನಾಂಗಗಳಿವೆ. ಎಂದೇ ಭಾಷೆಗೆ ಬರಹ ಅನಿವಾರ್ಯವಲ್ಲ. ಬರಹ ಇಲ್ಲದೆ ಭಾಷೆ ಬದುಕಿದೆ. ಪ್ರಪಂಚದಲ್ಲಿ ಹಲವಾರು ಭಾಷೆಗಳಿಗೆ ಲಿಪಿಯೇ ಇಲ್ಲ. ಲಿಪಿಯುಕ್ತ ಭಾಷೆಗಳು ಮಾತ್ರ ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ಇಂಥ ಭಾಷೆಗಳ ಪ್ರಾಚೀನ ಇತಿಹಾಸ ಮತ್ತು ಸಂಸ್ಕøತಿಗಳನ್ನು ಸಮಗ್ರವಾಗಿ ತಿಳಿಯಲು ಸಾಧ್ಯವಾಗುತ್ತದೆ.

ಭಾಷೆ ಕಾಲದಿಂದ ಕಾಲಕ್ಕೆ, ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುತ್ತದೆ. ಆದರೆ ಒಂದು ಕಾಲಕ್ಕೆ ಧ್ವನಿಗಳನ್ನೊ ಪದಗಳನ್ನೋ ಪ್ರತಿನಿಧಿಸಿರಬಹುದಾದ ಯಾವುದೇ ರೀತಿಯ ಬರಹಗಳು, ಆ ಭಾಷೆ ಬದಲಾವಣೆ ಹೊಂದಿದಂತೆ ಬದಲಾಗುವುದಿಲ್ಲ. ಈ ಕಾರಣದಿಂದಲೇ ಬರಹದ ರೀತಿಯಲ್ಲಿ ಅಂದರೆ ಲಿಪಿವ್ಯವಸ್ಥೆಯಲ್ಲಿ (ಶೈಲಿಯಲ್ಲಿ ಅಲ್ಲ) ಹೆಚ್ಚು ವ್ಯತ್ಯಾಸ ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ಯಾವುದೇ ಭಾಷೆಯ ಲಿಪಿವ್ಯವಸ್ಥೆ ಆ ಭಾಷೆಯನ್ನು ಸಮಗ್ರವಾಗಿ ಪ್ರತಿನಿಧಿಸುವುದಿಲ್ಲ.

ಒಬ್ಬ ವ್ಯಕ್ತಿ ನಾಗರಿಕ ಎನ್ನಿಸಿಕೊಳ್ಳಬೇಕಾದರೆ ಅವನಿಗೆ ಓದು ಬರಹ ಅಗತ್ಯ. ಇವು ತಿಳಿಯದವ ಸಮಾಜದಲ್ಲಿ ಹಿಂದುಳಿದವ. ಸಮಾಜದಲ್ಲಿ ಅವನಿಗೆ ಯಾವ ಸ್ಥಾನಮಾನವೂ ದೊರೆಯುವುದಿಲ್ಲ. ಹೀಗಾಗಿ ನಾಗರಿಕತೆಯ ಇತಿಹಾಸದಲ್ಲಿ ಬರಹಕ್ಕೆ ಪ್ರಮುಖ ಸ್ಥಾನ ಬಂದಿದೆ. ಭಾಷೆಯ ಪ್ರಯೋಜನ ಕಂಡುಕೊಂಡು ಮಾನವ ಮನುಷ್ಯನಾದ; ಬರಹದ ಪ್ರಯೋಜನ ಕಂಡುಕೊಂಡು ಮನುಷ್ಯ ನಾಗರಿಕನಾದ.

ಅಭಿಪ್ರಾಯಗಳನ್ನು ಇತರರಿಗೆ ತಿಳಿಸುವ ಸಾಧನಗಳ ಪೈಕಿ ಬರಹ ಒಂದು. ಸಿಳ್ಳು, ಚಪ್ಪಾಳೆ, ಭಾಷೆ ಮುಂತಾದವು ಕಿವಿಗೆ ಸಂಬಂಧಿಸಿದವಾದರೆ ಸಂಜ್ಞೆ, ಕಣ್ಣು ಸನ್ನೆಗಳು, ವಸ್ತುಗಳು, ಮೇಲಿನ ಗುರುತುಗಳು, ಚಿತ್ರಗಳು ಮುಂತಾದವು ಕಣ್ಣಿಗೆ ಸಂಬಂಧಿಸಿದವು. ಭಾಷೆಯ ಉಗಮವಾದಂದಿನಿಂದಲೇ ಬರಹವಿಧಾನವೂ ರೂಪುಗೊಳ್ಳುತ್ತ ಬಂತು. ಈ ವಿಧಾನಗಳ ಪೈಕಿ ಚಿತ್ರ ಬರಹವೇ ಪ್ರಾಚೀನವಾದುದು.

ಬರಹ ವಿಧಾನಗಳು: 1 ಚಿತ್ರ ಬರಹ (ಪಿಕ್ಟೋಗ್ರಫಿ): ಚಿತ್ರಗಳ ಮೂಲಕ ಅಭಿಪ್ರಾಯಗಳನ್ನು ನಿರೂಪಿಸುವ ಘಟ್ಟ ಬರಹದ ಇತಿಹಾಸದಲ್ಲಿ ಮೊದಲನೆಯದು. ವೃತ್ತ ಸೂರ್ಯನನ್ನೂ, ಮರದ ಚಿತ್ರ ಮರವನ್ನೂ, ಮನುಷ್ಯನ ಚಿತ್ರ ಮನುಷ್ಯನನ್ನೂ ಸೂಚಿಸಬಹುದು. ಇಂಥ ಹಲವಾರು ಚಿತ್ರಗಳನ್ನು ಒಂದು ಕ್ರಮದಲ್ಲಿ ಬರೆದು ಭಾವನೆಗಳನ್ನು ವ್ಯಕ್ತಪಡಿಸಬಹುದು. ಇಲ್ಲಿ ಚಿತ್ರಕ್ಕೂ ವಸ್ತುವಿಗೂ ನೇರವಾದ ಸಂಬಂಧವಿದ್ದರೆ ಭಾಷೆಗೂ ಚಿತ್ರಕ್ಕೂ ಇಂಥ ಸಂಬಂಧವಿರುವುದಿಲ್ಲ. ಚಿತ್ರಬರಹಗಳು ಪ್ರಾಚೀನ ಕಾಲದ ಈಜಿಪ್ಟ್, ಸ್ಪೆಯಿನ್, ಮೆಸೊಪೊಟೇಮಿಯ ಮುಂತಾದ ದೇಶಗಳಲ್ಲಿ ದೊರಕಿವೆ. ಆಧುನಿಕ ಯುಗದಲ್ಲಿ ಉತ್ತರ ಅಮೆರಿಕ, ದಕ್ಷಿಣ ಆಫ್ರಿಕ, ಆಸ್ಟ್ರೇಲಿಯಾದಲ್ಲಿಯ ಕೆಲವು ಆದಿವಾಸಿಗಳು ಚಿತ್ರಬರಹವನ್ನು ಬರೆದಿದ್ದಾರೆಂದು ತಿಳಿದುಬಂದಿದೆ. ಇವನ್ನು ಗುಹೆಗಳ ಗೋಡೆ ಮೇಲೂ ಬಂಡೆಗಳ ಮೇಲೂ ಕೊರೆಯಲಾಗಿದೆ. ಇವು ಹೆಚ್ಚಾಗಿ ಪ್ರಾಣಿಗಳ ಮತ್ತು ಮನುಷ್ಯರ ಚಿತ್ರಗಳಾಗಿವೆ.
2 ಭಾವಾತ್ಮಕ ಬರಹ (ಐಡಿಯೋಗ್ರಫಿ): ಚಿತ್ರಬರಹದಿಂದ ವಿಕಾಸಗೊಂಡ ಮತ್ತೊಂದು ಬರಹ ವಿಧಾನ, ಇಲ್ಲಿ ಚಿತ್ರಗಳು ವಸ್ತುಗಳನ್ನು ಸೂಚಿಸುವುದಕ್ಕಿಂತ ಹೆಚ್ಚಾಗಿ ಆ ವಸ್ತುಗಳಿಗೆ ಸಂಬಂಧಿಸಿದ ಅಥವಾ ಆ ವಸ್ತುಗಳಿಂದ ಸೂಚಿತವಾಗುವ ಭಾವಗಳನ್ನು ಸೂಚಿಸುತ್ತದೆ. ಉದಾಹರಣೆಗೆ ವೃತ್ತ ಸೂರ್ಯನನ್ನು ಮಾತ್ರವೇ ಅಲ್ಲದೆ ಬೆಳಕು, ಶಾಖ, ದಿನ, ಆಕಾಶ, ನೆರಳು, ದೇವತೆ ಮುಂತಾದವನ್ನು ಕೂಡ ಸೂಚಿಸಬಹುದು. ಕ್ಯಾಲಿಫೋರ್ನಿಯದ ಬಂಡೆಯ ಮೇಲೆ ಕೆತ್ತಿರುವ ಚಿತ್ರಗಳಲ್ಲಿ ಕಣ್ಣಿಂದ ನೀರು ತೊಟ್ಟಿಕ್ಕುತ್ತಿರುವ ಚಿತ್ರ ದುಃಖದ ಪ್ರತೀಕವಾಗಿ ಬಂದಿದೆ. ಪಶ್ಚಿಮ ಆಫ್ರಿಕದ ಜನರು ಕೊರೆದಿರುವ ಚಿತ್ರಗಳಲ್ಲಿ ಒಂದು ಬಟ್ಟೆಯ ತುಂಡು ಮತ್ತು ಒಂದು ಸೂಜಿಯ ಚಿತ್ರ ಇದೆ. ಇದು ಸೂಜಿ ಬಟ್ಟೆಯನ್ನು ಹೊಲಿಯುತ್ತದೆ ಎಂಬುದನ್ನು ಸೂಚಿಸುತ್ತದೆ. ಚೀನಾ ದೇಶದ ಅನೇಕ ಬರಹಗಳಲ್ಲಿ ಭಾವಾತ್ಮಕ ಬರಹಗಳು ಕಂಡುಬಂದಿವೆ. ಚಿತ್ರಬರಹದ ಮುಂದಿನ ಹಂತ ಭಾವಾತ್ಮಕ ಬರಹ ನಿಜ. ಆದರೆ ಇದರಲ್ಲಿಯೂ ಚಿತ್ರಗಳು ಮತ್ತು ಅವು ಸೂಚಿಸುವ ವಸ್ತು ವಿಶೇಷಗಳು ಅಥವಾ ಭಾವಗಳು ಮತ್ತು ಆ ಭಾಷೆಯಲ್ಲಿಯ ಪದಗಳು ಇವುಗಳ ನಡುವೆ ಸಂಬಂಧ ಕಲ್ಪಿತವಾಗಿಲ್ಲವೆಂಬ ಅಂಶ ಇವನ್ನು ಗಮನಿಸಿದಾಗ ತಿಳಿದು ಬರುತ್ತದೆ.
3 ಧ್ವನ್ಯಾತ್ಮಕ ಬರಹ (ಫೊನೆಟಿಕ್): ಭಾಷೆಯಲ್ಲಿಯ ಧ್ವನಿಗಳೇ ಈ ಬರಹದ ಲಿಪಿಸಂಕೇತಗಳು. ಈ ಬರಹ ವಿಧಾನದಲ್ಲಿ ಚಿಹ್ನೆಗಳಿಗೂ ವಸ್ತುಗಳಿಗೂ ಇದ್ದ ನೇರ ಸಂಪರ್ಕ ಕಡಿದುಹೋಗಿ, ಚಿಹ್ನೆಗಳಿಗೂ ವಸ್ತುಗಳಿಗೆ ಭಾಷೆಯಲ್ಲಿರುವ ಹೆಸರುಗಳಿಗೂ ಅಥವಾ ಪದಗಳಿಗೂ ನೇರ ಸಂಬಂಧ ಉಂಟಾಯಿತು. ಉದಾಹರಣೆಗೆ ಮುಖದ ಚಿತ್ರ ಮುಖವನ್ನು ಸೂಚಿಸುವುದರ ಬದಲು ಮುಖಕ್ಕೆ ಭಾಷೆಯಲಿದ್ದ ಪದದ ಸಂಕೇತವಾಗಿ ಪರಿಣಮಿಸಿತು. ಆಧುನಿಕ ಭಾಷಾವಿಜ್ಞಾನಿಗಳು ಧ್ವನ್ಯಾತ್ಮಕ ಬರಹವನ್ನು ಹೆಚ್ಚು ವೈಜ್ಞಾನಿಕ ಬರಹವೆಂದು ಪರಿಗಣಿಸಿದ್ದಾರೆ.

4 ಪದಾತ್ಮಕ ಬರಹ (ಲಾಗೊಗ್ರಾಫಿಕ್); ಒಂದೊಂದು ಪದಕ್ಕೂ ಒಂದೊಂದು ಚಿಹ್ನೆಯಿರುವ ಬರಹವನ್ನು ಪದಬರಹ ಎನ್ನಬಹುದು. ಚೀನಿಯರ ಬರಹದ ಚಿಹ್ನೆಗಳಲ್ಲಿ ಕೆಲವು ಚಿತ್ರಗಳನ್ನು ಸುಲಭವಾಗಿ ಗುರುತಿಸಬಹುದು. ಪಕ್ಕದ ಚಿತ್ರದಲ್ಲಿಯ ಚಿಹ್ನೆ ಮರ ಎಂಬರ್ಥದ ಪದವನ್ನು (mu) ಸೂಚಿಸುತ್ತದೆ. ಪದ ಬರಹ ಸುಲಭ ಸಾಧ್ಯವಲ್ಲ. ಶ್ರಮದಾಯಕವಾದುದು. ಮುಂದೆ ಈ ಬರಹ ವಿಧಾನ ಮತ್ತೂ ಸರಳಗೊಂಡು ಅಕ್ಷರ ಬರಹಕ್ಕೆ ದಾರಿ ಮಾಡಿಕೊಟ್ಟಿತ್ತು.

5 ಅಕ್ಷರಾತ್ಮಕ ಬರಹ (ಸಿಲಾಬಿಕ್): ಪದಾತ್ಮಕ ಬರಹದ ಮುಂದಿನ ಹೆಜ್ಜೆಯಿದು ಅಕ್ಷರವೆಂದರೆ ಭಾಷೆಯ ಒಂದು ಸ್ವರ ಅಥವಾ ವ್ಯಂಜನ-ವ್ಯಂಜನಗಳ ಸಮೇತ ವಾದ ಸ್ವರ. ಈ ಹಂತದಲ್ಲಿ ಒಂದು ಚಿಹ್ನೆ ಒಂದು ಸ್ವರಕ್ಕೆ ಅಥವಾ ವ್ಯಂಜನ-ವ್ಯಂಜನಗಳ ಸಮೇತವಾದ ಒಂದು ಸ್ವರಕ್ಕೆ ಸಂಕೇತವಾಯಿತು. ಉದಾಹರಣೆಗೆ 'ಕ ಎಂಬ ಅಕ್ಷರ ಗಮನಿಸಿದಾಗ ಅದರಲ್ಲಿ ಕ್ ಮತ್ತು ಅ ಎಂಬ ಎರಡು ಧ್ವನಿಗಳಿರುವುದು ಕಂಡುಬರುತ್ತದೆ. ತಮಿಳು, ಕನ್ನಡ, ತೆಲುಗು, ಮಲೆಯಾಳಮ್ ಭಾಷೆಗಳಲ್ಲಿ ಬಳಸುವ ಲಿಪಿಗಳು ಅಕ್ಷರ ಲಿಪಿಗಳು. ಭಾಷಾವಿಜ್ಞನಿಗಳು ಇವನ್ನೇ ಆಧರಿಸಿ ಕೆಲವು ಭಾಷೆಗಳನ್ನು ವಿಶ್ಲೇಷಿಸುವ ಯತ್ನ ಮಾಡಿದ್ದಾರೆ.

	6 ವರ್ಣಮಾಲಾತ್ಮಕ ಬರಹ (ಆಲ್ಫಬೆಟಿಕ್); ಈ ರೀತಿಯ ಬರಹದಲ್ಲಿ, ಭಾಷೆಯ ಎಲ್ಲ ಧ್ವನಿಗಳಿಗೂ ಅಂದರೆ ಒಂದೊಂದು ಸ್ವರಕ್ಕೂ ಒಂದೊಂದು ವ್ಯಂಜನಕ್ಕೂ ಪ್ರತ್ಯೇಕ ಚಿಹ್ನೆಗಳು ಕಲ್ಪಿತವಾದವು. ಅಕ್ಷರಾತ್ಮಕ ಬರಹದಲ್ಲಿ ಸ್ವರಸಮೇತವಾದ ವ್ಯಂಜನಗಳನ್ನು ಲಿಪಿಗಳಾಗಿ ಬಳಸುವಂತೆಯೇ ಒಂದು ಭಾಷೆಯ ಮುಖ್ಯ ಧ್ವನಿಗಳನ್ನು ಆಧರಿಸಿ ವರ್ಣಮಾಲಾತ್ಮಕ ಬರಹದಲ್ಲಿ ಬರೆಯಲಾಯಿತು. ಇವೇ ಆ ಭಾಷೆಯ ಧ್ವನಿಮಾಗಳು. ಭಾಷಾವಿಜ್ಞಾನಿಗಳು ಇವನ್ನು ವರ್ಣಗಳೆಂದು ಕರೆದಿದ್ದಾರೆ. ವರ್ಣಗಳನ್ನು ಬಳಸಿ ಬರೆಯುವ ವಿಧಾನವೇ ಧ್ವನಿಮಾತ್ಮಕ ಬರಹ.

ಅಕ್ಷರಾತ್ಮಕ ಮತ್ತು ವರ್ಣಮಾಲಾತ್ಮಕ ಬರಹಗಳು ತಡವಾಗಿ ಪ್ರಚಾರಕ್ಕೆ ಬಂದ ಬರಹ ವಿಧಾನಗಳು, ಇವುಗಳಲ್ಲಿ ಪ್ರತಿಯೊಂದು ಧ್ವನಿಗೂ ಬೇರೆ ಬೇರೆ ಸಂಕೇತಗಳು ದೊರೆಯುತ್ತವೆಯಾದರೂ ಇವು ಧ್ವನ್ಯಾತ್ಮಕ ಬರಹದಷ್ಟು ಸೂಕ್ಷ್ಮವಾದವಲ್ಲ. ಪ್ರತಿಯೊಂದು ಉಚ್ಚರಿತ ಧ್ವನಿಗೂ ಧ್ವನಿಸಂಕೇತ ರೂಪಿಸಿಕೊಂಡು ಬಳಸುವುದು ಕಷ್ಟ. ಕ್ಲಿಷ್ಟತೆ ಹೆಚ್ಚು. ಈ ಕಾರಣದಿಂದಲೇ ಅಕ್ಷರಾತ್ಮಕ ಮತ್ತು ವರ್ಣ ಮಾಲಾತ್ಮಕ ಬರಹಗಳು ಸರಳ ಬರಹ ವಿಧಾನಗಳಾಗಿ ಕಂಡುಬರುತ್ತವೆ. ದೇವನಾಗರಿ ಲಿಪಿಯನ್ನು ಅಕ್ಷರಾತ್ಮಕ ಬರಹಕ್ಕೂ ರೋಮನ್ ಲಿಪಿಯನ್ನು ವರ್ಣಮಾಲಾತ್ಮಕ ಬರಹಕ್ಕೂ ಬಳಸಿ ಪರಿಶೀಲಿಸಿ ತಿಳಿಯಬಹುದು. ಹೀಗೆ ಬರಹ ವಿಧಾನ ಪ್ರಾರಂಭದಲ್ಲಿ ಚಿತ್ರಗಳಿಂದ ಆರಂಭವಾಗಿ ಬೇರೆಬೇರೆ ಘಟ್ಟಗಳಲ್ಲಿ ವಿಕಾಸಹೊಂದಿ ಈಗಿನ ರೂಪ ತಲುಪಿದೆ.

ಪ್ರಪಂಚದ ಬೇರೆ ಬೇರೆ ಭಾಷಾವರ್ಗಗಳಿಗೆ ಸೇರಿದ ಭಾಷೆಗಳನ್ನು ಬರೆಯಲು ಮಾನವ ಒಂದೇ ವಿಧಾನ ಅನುಸರಿಸುತ್ತಿಲ್ಲ. ಉದಾಹರಣೆಗೆ ಕನ್ನಡ, ತೆಲುಗು, ತಮಿಳು, ಹಿಂದಿ, ಸಂಸ್ಕøತ ಮುಂತಾದ ಭಾಷೆಗಳನ್ನು ಎಡದಿಂದ ಬಲಕ್ಕೆ ಬರೆದರೆ ಉರ್ದು, ಅರಬ್ಬಿ, ಪಾರ್ಸಿ ಭಾಷೆಗಳನ್ನು ಬಲದಿಂದ ಎಡಕ್ಕೆ ಬರೆಯುತ್ತಾರೆ, ಚೀನೀ ಭಾಷೆಯನ್ನು ಮೇಲಿನಿಂದ ಕೆಲಕ್ಕೆ ಬರೆಯುತ್ತಾರೆ.
(ಕೆ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ